Saturday, October 2, 2010

ಕ್ಷುತ್ತುಮಮತೆಗಳು ವೀವಕೆ ಕುಲಿಮೆಸುತ್ತಿಗೆಗಳ್

ಕ್ಷುತ್ತುಮಮತೆಗಳು ವೀವಕೆ ಕುಲಿಮೆಸುತ್ತಿಗೆಗಳ್ |
ಉತ್ತಮವದನಿಪುವುವು ಕಿಟ್ಟಗಳ ಕಳೆದು ||
ಚಿತ್ತ ಸಂಸ್ಕಾರಸಾಧನವಯ್ಯ ಸಮ್ಸಾರ |
ತತ್ತ್ವಪ್ರವೃತಂಗೆ - ಮಂಕುತಿಮ್ಮ ||

ನಮ್ಮಯ ಜೀವನದಲ್ಲಿ ಹೊಟ್ಟೆ ಮತ್ತು ಮಮತೆಗಳು ಕುಲುಮೆ ಮತ್ತು ಸುತ್ತಿಗೆಗಳು ಇದ್ದ ಹಾಗೆ... ಅದುವೇ ನಮ್ಮಯ ಜೀವನದ ಜ್ಯೋತಿಯ ಕಿಟ್ಟ ಕಳೆದು ಶುದ್ದಿ ಮಾಡುತ್ತದೆ. ಸಾಧಕನಿಗೆ ಸಂಸ್ಕಾರವು ದಿವ್ಯ ಸಾಧನವಾಗಿದೆ. ಸಾಧಕನು ತನ್ನಯ ಬಾಳಹಾದಿಯಲ್ಲಿ ಅಡ್ಡ ಬರುವ ಸಣ್ಣಪುಟ್ಟ ವಿಷಯಗಳನ್ನೇ ನೆನೆಯದೆ, ಪರಿತಪಿಸದೆ ತನ್ನಯ ದಾರಿಯಲ್ಲಿ ಸಾಗುತ್ತಲಿರುತ್ತಾನೆ.. ನನ್ನಯ ಸ್ನೇಹಿತರೂ ಅದೇ ಹಾದಿಯನ್ನು ತುಳಿಯತ್ತಾರೆಂದು ಆಶಿಸುತ್ತೇನೆ.. ಎಂದಿನಂತೆ ನಿಮಗೆ ನಲ್ಮೆಯ ಶುಭದಿನ, ಶುಭೋದಯ.

ಎಲೆಕಟ್ಟನಾಗಾಗ ಕಲೆಸಿಕೊಡುವುದೆ ಸೃಷ್ಟಿ

ಎಲೆಕಟ್ಟನಾಗಾಗ ಕಲೆಸಿಕೊಡುವುದೆ ಸೃಷ್ಟಿ |
ಬಳಕಲೆಯ ಗತಿಯೆಂತೊ ಎಲ್ಲಿ ಸೇರುವುದೋ ||
ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ |
ಅಲೆಯುವೆವು ನಾವಂತು - ಮಂಕುತಿಮ್ಮ ||

ಇಸ್ಪೀಟ್ ಆಟದ ಎಲೆಗಳನ್ನು ನಾವು ಕಲಿಸಿಕೊಡುವ ಕೆಲಸವನ್ನು ಸೃಷ್ಟಿಯೇ ನಮ್ಮ ಜೀವನದಲ್ಲಿ ಮಾಡಿಬಿದುತ್ತದೆ ನೋಡಿ.. ನಮಗೆ ಆಟಕ್ಕೆ ಬೇಕಾದ ಎಲೆ ಬಂದಲ್ಲಿ ಇಟ್ಟುಕೊಳ್ಳುತ್ತೇವೆ ಇಲ್ಲದಿದ್ದರೆ ಅದನ್ನು ಬಿಟ್ಟುಬಿಡುತ್ತೇವೆ. ನಂತರ ಆ ಅಲೆಯ ಚಲನೆ ಹೇಗೆಗೋ ಆಗಿಬಿಡುತ್ತದೆ ಅಲ್ಲವೆ? ಒಂದೊಂದು ದಿಕ್ಕಿನಲ್ಲಿ ನಮಗೆ ಬೇಕಾದ ಎಲೆಗಳೂ, ನಮ್ಮಯ ಕೈಗೆ ಬೇಡದಿದ್ದ ಎಲೆಗಳು ಇರುತ್ತವೆ.. ಅದೇ ನಿಜಜೀವನದಲ್ಲಿ ವಿಧಿಯು ನಮ್ಮನ್ನು ಅಲುಗಾಡಿಸಿಬಿಡುತ್ತದೆ... ಒಟ್ಟಿನಲ್ಲಿ ನಮ್ಮಯ ಜೀವನವೇ ಅಲೆದಾಟದ ಇಸ್ಪೀಟಿನ ಎಲೆಯಂತೆ... ಒಮ್ಮೆ ಆಟ ಶೋ ಮಾಡುತ್ತೇವೆ ಒಳ್ಳೇಯ ಎಲೆ ಸಿಕ್ಕಾಗ.. ಇಲ್ಲದಿದ್ದರೆ ಕೆಲವೊಂದು ಆಟ ಬಿಟ್ಟು ಸುಮ್ಮನೆ ಕುಂತಂಗೆ ಜೀವನದಲ್ಲಿ ಒಳ್ಳೇಯ ಅವಕಾಶಗಳಿಗೆ ಕಾಯುತ್ತೇವೆ... ಸ್ನೇಹಿತರೆ ಎಂದಿನಂತೆ ನಿಮಗೆ ನಲ್ಮೆಯ ಶುಭದಿನ ಶುಭೋದಯ

ಜಗದಿ ಬಂದೀಗೃಹದಿ ಬಿಗಿಯುತಿದೆ ವಿಧಿ ನಿನ್ನ

ಜಗದಿ ಬಂದೀಗೃಹದಿ ಬಿಗಿಯುತಿದೆ ವಿಧಿ ನಿನ್ನ |
ನಿಗಮ ಸತ್ಯಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು - ಮಂಕುತಿಮ್ಮ ||

ವಿಧಿಯು ನಮ್ಮೆಲ್ಲರನ್ನು ಈ ಪ್ರಪಂಚವೆಂಬ ಸೆರಮನೆಯಲ್ಲಿ ಬಂಧಿಸಿ ಇಟ್ಟುಬಿಟ್ಟಿದೆ. ಯಾವುದೇ ಕಾರಣಕ್ಕೂ ನಾವು ಈ ಸೆರಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !!! ಆದರೆ ಈ ಸೆರಮನೆಗೆ ಕಲೆ-ಪ್ರೀತಿ-ದ್ವೇಷಾಸೂಯೆ-ಕಾವ್ಯಗಳೆ
ಂಬ ಕಿಟಕಿಯಿದೆ. ಆ ಕಿಟಕಿಯ ಮೂಲಕ ಆನಂತ ದರ್ಶನ ಮಾಡಬಹುದು. ಆದರೆ ಅದರಲ್ಲಿ ದ್ವೇಷಾಸೂಯೆ ಗಳನ್ನು ಬಿಟ್ಟು ಉಳಿದವುಗಳಿಂದ ಲೋಕವನ್ನು ನಗಿಸಿ, ಎಲ್ಲರ ಪ್ರೀತಿ - ಕೃಪೆಗೆ ಪಾತ್ರರಾಗಿ ಮುಕ್ತಿಯನ್ನು ಹೊಂದೋಣವಲ್ಲವೆ? ಎಂದಿನಂತೆ ನನ್ನ ನೆಚ್ಚಿನ ತಿಮ್ಮ ತಿಮ್ಮಿಯರಿಗೆ ನಲ್ಮೆಯ , ಪ್ರೀತಿಯ ಶುಭದಿನ ಶುಭೋದಯ

ತನುಭವವ್ಯಾಮೋಹ ಮುಸಿಕಿತಾ ವ್ಯಾಸನಂ

ತನುಭವವ್ಯಾಮೋಹ ಮುಸಿಕಿತಾ ವ್ಯಾಸನಂ |
ಜನಿಪುದು ಪ್ರಕೃತಿತಂತ್ರದೆ ಹೃದಯತಲದೊಳ್ ||
ಕ್ಷಣಮಾತ್ರ ಮಾನುಮದು ಕಣ್ಣೀರ ಬರಿಸುವುದು |
ಹಣಿಸಬೇಡದನು ನೀಂ - ಮಂಕುತಿಮ್ಮ ||

ಈ ವ್ಯಾಮೋಹ ನೋಡಿ, ಹೆಂಗಿರುತ್ತೆ? ನಮ್ಮ ನಮ್ಮ ಅಂತರಂಗದಲ್ಲಿ ಪ್ರಕೃತಿಯೇ ನಮಗರಿವಲ್ಲದಂತೆ ವ್ಯಾಮೋಹವೆಂಬ ಬೀಜವನ್ನು ತಂತ್ರದಿಂದ ಬಿತ್ತನೆ ಮಾಡಿಬಿಟ್ಟಿರುತ್ತೆ.. ವ್ಯಾಸರಂತಹ ಪರಮ ಜ್ಞಾನಿಗಳಿಗೂ ದೇಹದ ಮೇಲೆ ವ್ಯಾಮೋಹವಿತ್ತಂತೆ.. ಇನ್ನು ನಮ್ಮ ನಿಮ್ಮ ಪಾಡೇನು? ಒಟ್ಟಿನಲ್ಲಿ ಆ ವ್ಯಾಮೋಹವು ಕ್ಷಣಕಾಲವಾದರೂ ದುಃಖದಿಂದ ಕಂಬನಿ ಸುರಿಯುವಂತೆ ಮಾಡಿಬಿಡುತ್ತದೆ ಅಲ್ಲವೆ? ಆದರೂ ಅದನ್ನು ಲೆಕ್ಕಿಸದೆ ಜೀವನಪಯಣವೆಂಬ ಈ ಬಾಳಹಾದಿಯನ್ನು ಸವೆಸಲೇಬೇಕು.. ನನ್ನ ಸ್ನೇಹಿತರು ಇದ್ಯಾವುದೂ ಲೆಕ್ಕಿಸದೆ ಮುನ್ನುಗ್ಗಿ, ಬಾಳಪಯಾಣದಲ್ಲಿ ಯಶಸ್ವಿಯಾಗಿಅಲೆಂದು ಹಾರೈಸುತ್ತಾ ನಿಮಗಿ ಶುಭದಿನ ಶುಭೋದಯವೆನುತಾ ಕಾಯಕದೆಡೆ ರೈಟ್ ಹೇಳ್ತೀನಿ