Tuesday, September 7, 2010

ಕಾಯಕಿಂತಾತ್ಮ ಪಿರಿದೆಂದು ಜನವರಿತಂದು

ಕಾಯಕಿಂತಾತ್ಮ ಪಿರಿದೆಂದು ಜನವರಿತಂದು
ಸ್ವೀಯೇಚ್ಚೆಯಿಂ ಸಮಾಧಾನ ಕೆಡದಂದು
ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು
ಶ್ರೇಯ ನೆರವುದು ಜಗಕೆ - ಮಂಕುತಿಮ್ಮ

ಜಗದ ತಪ್ಪು ಒಪ್ಪುಗಳನ್ನು ತಿದ್ದುವುದಕ್ಕಿಂತ ಮುಂಚೆ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಜಗದಲ್ಲಿ ಶುಖ-ಶಾಂತಿ ಲಭಿಸಬೇಕಾದರೆ ಮೊದಲು ಮಾನವ ದೇಹಕ್ಕಿಂತ ಆತ್ಮವೇ ದೊಡ್ಡದೆಂದು ಆತ್ಮಸಾಕ್ಷಿಗೆ ವಿರುದ್ದ ನಡೆಯದಂತೆ ಜೀವಿಸಲು ಕಲಿತಾಗ, ತನ್ನ ಆಸೆಯಿಂದ ಜಗತ್ತಿನ ಶಾಂತಿ-ಸಮಾಧಾನ ಕದಡದು ಎಂದು ಅರಿತಾಗ, ತಾನು ಗಳಿಸಿದ ಆದಾಯದದಲ್ಲಿ ಸಮಪಾಲು ರಾಜ್ಯ-ರಾಷ್ಟ್ರಗಳಿಗೆ ಲಭಿಸಿದಾಗ ರಾಷ್ಟ್ರವಲ್ಲದೆ ಇಡೀ ಜಗತ್ತಿಗೆ ಶ್ರೇಯಸ್ಸುಂಟಾಗಿ ಸುಭಿಕ್ಷೆಯಾಗಿರುತ್ತದೆಯಲ್ಲವೆ?

ಪ್ರೀತಿಯಿಂದ ಶುಭದಿನ ಶುಭೋದಯ
ಭಿತ್ತಿಯೊಂದಿಲ್ಲದಿದ್ದರೆ ಚಿತ್ರವೆಂತಿರಲಹುದು?
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?
ನಿತ್ಯಸತ್ತ್ವವೆ ಭಿತ್ತಿ ಜೀವಿತ ಕ್ಷಣಚಿತ್ರ
ತತ್ತ್ವವೀ ಸಂಬಂಧ - ಮಂಕುತಿಮ್ಮ

ಭಿತ್ತಿಚಿತ್ರ ಎಂಬುದೊಂದು ಚಿತ್ರಕಲೆಯ ಪ್ರಕಾರದಂತೆ.... ಗೋಡೆಯಿಲ್ಲದೆ ಚಿತ್ರ ರಚಿಸಲು ಸಾಧ್ಯವೆ? ಹಾಗೆಯೇ ಚಿತ್ರವಿಲ್ಲದ ಗೋಡೆ ಅಂದವಾಗಿರಲು ಹೆಂಗೆ ಸಾಧ್ಯ? ನೋಡಿ ನಮ್ಮ ಉದ್ಯಾನನಗರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಗೋಡೆಗಳ ಮೇಲೆ ಕನ್ನಡನಾಡಿನ ಪ್ರಸಿದ್ದ ಚಿತ್ರಕಲೆಯನ್ನು ಪರಿಚಯ ಮಾಡಿಕೊಡುತ್ತಿದೆ ನೋಡಿ.. ಸಿನಿಮಾಭಿತ್ತಿ ಪತ್ರದ ಹಾವಳಿಯಿಲ್ಲ, ಪಾನ್ ಜಗಿದು ವಿಕೃತಿಗೊಳಿಸುವವರ ಹಾವಳಿಯಂತೂ ಇಲ್ಲವೇ ಇಲ್ಲ... ನೋಡುವುದಿಕ್ಕೆ ಎಷ್ಟು ಅಂದವಾಗಿದೆ.... ಎಕೆಂದರೆ ಗೋಡೆ ನಿತ್ಯ ಸತ್ಯದಂತೆ, ಚಿತ್ರ ಜೀವಿತದ ಕ್ಷಣದಂತೆ.... ಈ ತತ್ವವೇ ಭಿತ್ತಿ-ಚಿತ್ರಗಳ ಸಂಬಂಧ ಅಲ್ಲವೆ?? ಸ್ನೇಹಿತರೆ ಪ್ರೀತಿಯಿಂದ ನಿಮಗೆ ಶುಭದಿನ ಶುಭೋದಯ

ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು?
ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್
ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ
ಒಲವಾತ್ಮವಿಸ್ತಣಂ - ಮಂಕುತಿಮ್ಮ

ಕ್ರೂರಮೃಗವೆನಿಸಿ, ನರಭಕ್ಷಕ ಹುಲಿಯೆಂದು ಕರೆಸಿಕೊಳ್ಳುವ ಹುಲಿಯು ತನ್ನ ಮರಿಗಳನ್ನು ವಾತ್ಸಲ್ಯದಿಂದ ಸಲಹಿ ಸಾಕುವುದಿಲ್ಲವೆ? ಅಂತೆಯೇ ಆ ಹಗೆತನ ಎಂಬ ಗುಹೆಯಲ್ಲಿ ಪ್ರೇಮದ ಕರುಳು ಸಹ ಅಡಗಿರುತ್ತದೆಯಲ್ಲವೆ? ಹಾಗಾದರೆ ಪ್ರಾಣಿಗಳಲ್ಲಿ ಶ್ರೇಷ್ಟವಾದ ಮನುಷ್ಯ ಪ್ರಾಣಿಯು ಮಾಡಬೇಕಾದ ಮೊದಲ ಕೆಲಸ... ಒಲುಮೆಯನ್ನು ಹೊರಹೊಮ್ಮಿಸಿ, ಆ ಒಲುಮೆಯಿಂದ ಅತ್ಮವಿಸ್ತಾರವಾಗುವಂತೆ ನೊಡಿಕೊಳ್ಳುವುದು ಮಾನವನ ಹೆಗ್ಗಳಿಕೆಯೆಂದೇ ನಾನು ಭಾವಿಸುವೆ. ದ್ವೇಷ ಅಸೂಯೆಗಿಂತ ಪರಮೋಚ್ಚ ಶಕ್ತಿಯಿರುವುದು ಆ ಒಲುಮೆಗೆ ಮಾತ್ರವೆ.... ಅಲ್ಲವೆ ನನ್ನೊಲವಿನ ಸ್ನೇಹಿತರೆ ..... ಅದೇ ಒಲುಮೆಯಿಂದ ನನ್ನ ನೆಚ್ಚಿನ ಸ್ನೇಹಿತ/ಸ್ನೇಹಿತೆಯರಿಗೆ ಒಲವಿನಿಂದ ಶುಭದಿನ ಶುಭೋದಯ

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ

ಹೆಜ್ಜೆಯನ್ನು ತಪ್ಪಿ ಜಾರಿಬಿದ್ದುಬಿಡುವುದು, ನಂತರ ತಡವಿಕೊಂಡು ಮೇಲೆಳುವುದು, ಮಿತಿಮೀರಿ ಉಣ್ಣುವುದು, ನಂತರ ಅರೋಗ್ಯ ಹದೆಗೆಟ್ಟಾಗ ಔಷದಿ ಸೇವಿಸುವುದು. ಸ್ನೇಹಿತರೊಂದಿಗೋ ಕಚೇರಿಯಲ್ಲಿಯೋ ಇಲ್ಲವೆ ವ್ಯವಹರಿಸುವಾಗಲೋ ತಾಳ್ಮೆಗೆಟ್ಟು, ದುಡುಕಿ ಬುದ್ದಿಕೆಟ್ಟು ವರ್ತಿಸುವುದು, ನಂತರ ನಮ್ಮ ತಪ್ಪು ತಿದ್ದುಕೊಳ್ಳುವುದು ಸಹಜವಲ್ಲವೆ ನನ್ನ ಮೆಚ್ಚಿನ ತಿಮ್ಮತಿಮ್ಮಯರೆ? ಯಾಕೆಂದರೆ ಇವೇ ನಮ್ಮ ಇಷ್ಟು ವರ್ಷದ ಬದುಕೆಂಬ ಬಾಳದೋಣಿಯಲ್ಲಿ ಕಂಡುಬಂದ, ಕಂಡಂತಹ ನಗ್ನಸತ್ಯವಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

No comments:

Post a Comment