Tuesday, September 7, 2010

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ |

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ
ಕಾಣಿಪುದದಾತ್ಮಸ್ವಭಾವದುದ್ಗಮವ
ಏನಾಶೆ! ಯೇನ ಸಾಹಸ! ವೇನು ಭಂಗಿಗಳು
ಅನುಭವವೇದವದು - ಮಂಕುತಿಮ್ಮ

ಈ ಮಾನವನ ಚರಿತ್ರೆ ಹೇಗಿದೆಯೆಂದರೆ, ಪರಸತ್ಯ ತುಂಬಿದ ಸಾಕ್ಷಾತ್ ಕವಿತೆಯಿದ್ದಂತೆ. ಅದು ಆತ್ಮನ ಸ್ವಭಾವವದ ಉಗಮವನ್ನು ತೋರಿಸಿಕೊಡುತ್ತದೆ. ಅಬ್ಬಬ್ಬಾ.. ಎಂತೆಂತಹ ಸಾಹಸ, ಕ್ರೀಡೆಗಳು, ಆಸೆಗಳು, ಆ ಒನಪು ವಯ್ಯಾರಗಳು, ಆಸೆ ಆಕಾಂಕ್ಷೆಗಳು... ಆ ಭಾವ ಭಂಗಿಗಳು ಓಹ್ ಅನುಭವದ ವೇದವೇ ಆಗಿರುತ್ತದೆಯಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ
ಕುಣಿಕೆಯನ್ನು ನಿನ್ನ ಕೊರಳಿಗೆ ಹೂಡಿ ಚಿರಕಾಲ
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ

ಸ್ನೇಹಿತರೆ ಆ ಯಮಪಾಶವು ನಮ್ಮನ್ನು ಒಂದೇ ಕ್ಷಣದಲ್ಲಿ ನಮ್ಮೀ ಜೀವಾತ್ಮಕ್ಕೆ ಮುಕ್ತಿ ಕೊಟ್ಟುಬಿಡುತ್ತದೆ. ಆದರೆ ಮೋಹ ಮಮತೆಯೆಂಬ ಪಾಶ????? ಈ ಮೋಹ ಪಾಶ ನಮ್ಮನ್ನು ಅಣುಅಣುವಾಗಿ ಕೊಲ್ಲುತ್ತಲೇ ಇರುತ್ತದೆ ನೋಡಿ. ನಾವು ಎಷ್ಟು ಬೇಡ ಬೇಡವೆಂದರೂ ಅದರ ಕುಣಿಕೆಗೆ ನಮಗೆ ಅರಿವಿಲ್ಲದಂತೆ ಸಿಕ್ಕುಬಿಟ್ಟಿರುತ್ತೇವೆ. ನಮ್ಮೀ ದೇಹದಲ್ಲಿ "ಜೀವಾತ್ಮ" ಇರುವವರೆಗೂ ಮೋಹ ಪಾಶದಲ್ಲಿ ಸಿಕ್ಕು ಕ್ಷಣಕ್ಷಣಕ್ಕೂ ಅದರ ಹಿಡಿತದಿಂದ ನರಳಾಡುತ್ತಲೇ ಇರುತ್ತೇವಲ್ಲವೆ? ಅಂತಹ ಮೋಹಪಾಶದ ಹಿಡಿತದಿಂದ ನಮ್ಮ ತಿಮ್ಮ/ತಿಮ್ಮಿಯರಿಗೆ ಶೇಕಡಾ ತೊಂಬತ್ತರಷ್ಟು ಆನಂದ, ಸಂತೋಷ ಲಭಿಸಲೆಂದು ಆಶಿಸುತ್ತಾ, ಎಂದಿನಂತೆ ನಿಮ್ಮ ಸ್ನೇಹಿತನ ರವಿಯ ಶುಭನುಡಿ - ಶುಭದಿನ ಶುಭೋದಯ

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ
ಯಕ್ಷಿಯರು ಮ್ಯಾಕ್‌ಬೆತನಿಗೆಸಗಿದುಪದೇಶ
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು?
ಅಕ್ಷಿ ನಿರ್ಮಲವೇನೊ ? - ಮಂಕುತಿಮ್ಮ

ನಮ್ಮೀ ಮನಕೆ ಆಸೆಗಳನ್ನು ಉಂಟುಮಾಡುವ ಬಂಧು - ಮಿತ್ರರ ಉಪಕಾರವು ಎಷ್ಟೆಂದರೆ.... ಮಾಟಗಾತಿ ಮ್ಯಾಕ್‌ಬೆತ್‌ನಿಗೆ ಮಾಡಿದ ಉಪಕಾರವಿದ್ದಂತೆ ಎಂದರೆ ತಪ್ಪಾಗಲಾರದು. ಇತ್ತ ನಿರ್ಮಲ ಪ್ರೀತಿ- ವಾತ್ಸಲ್ಯವೂ ಇಲ್ಲದೆ ಅತ್ತ ಕೋಪ-ತಾಪವೂ ಇಲ್ಲದೆ ಸಂಶಯದ ನೋಟದಲೇ ಜೀವನ ಪರ್ಯಂತ ಕಳೆದುಬಿಡುತ್ತೇವೋ ಏನೋ... ಒಟ್ಟಿನಲ್ಲಿ ಕಣ್ಣನೋಟ ನಿರ್ಮಲವಿರಬೇಕಷ್ಟೆ.... ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ.. ತಾಯಿ ಮಹಾಲಕ್ಷಿಯ ಕೃಪಕಟಾಕ್ಷ ಲಭಿಸಲಿ.. ಲಭಿಸಿದ ಮೇಲೆ ಈ ಬಡಪಾಯಿಯ ನೆನಪೂ ಇರಲೆಂದು ಹಾರೈಸುತ್ತಾ ರೈಟ್ ಹೇಳ್ತಾ ಇದ್ದೀನಿ

ಬಿತ್ತ ಮಳೆಗಳವೋಲು ಯತ್ನ ಸೈವಿಕ ನಮಗೆ
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ
ಗೊತ್ತಿಲ್ಲ ಫಲದ ಬಗೆ - ಮಂಕುತಿಮ್ಮ

ಹದವಾದ ಮಳೆ ಮತ್ತು ಒಳ್ಳೇಯ ಬೀಜ ಇದ್ದರೆ ಬೆಳೆ ಎಷ್ಟು ಹಸನಾಗಿ ಬರುವುದಲ್ಲವೆ? ಹಾಗೆಯೇ ನಮ್ಮ ಪ್ರಯತ್ನ ಮತ್ತು ದೈವಕೃಪೆ ಇದ್ದಲ್ಲಿ ಜಯಭೇರಿ.... ನಮ್ಮ ಪ್ರಯತ್ನ ನಿಂತರೂ ಹಾನಿ ಜೊತೆಗೆ ದೈವಕೃಪೆ ತಪ್ಪಿದರೂ ತಾಪ. ಒಟ್ಟಿನಲ್ಲಿ ಫಲವೇನೆಂದು ತಿಳಿಯೋಲ್ಲ ನೋಡೀ ಸ್ನೇಹಿತರೆ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ - ಶುಭದಿನ ಶುಭೋದಯ

ಮೂರಿರಲಿವಾದ, ಮುನ್ನೂರಿರಲಿ : ಸಕಲರುಂ
ಸಾರವಸ್ತುವನೊಂದನೊಪ್ಪಿಕೊಳುವರೇ
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ
ಭಾರವಾಗದು ಜಗಕೆ - ಮಂಕುತಿಮ್ಮ

ನಾಸ್ತಿಕನಾಗಲಿ ಇಲ್ಲವೇ ಅಸ್ತಿಕನಾಗಲಿ, ವಾದ - ವಾಗ್ವಾದಗಳು ಮೂರಿರಲಿ ಯಾ ಮುನ್ನೂರಿರಲಿ, ಎಲ್ಲರೂ ಭಗವಂತನ ಇರುವಿಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಜಗದಲಿ ಏನೇ ಆಗಲಿ, ಅದು ನಮ್ಮ ಎಣಿಕೆಯಂತೆ ಆಗದಿರಬಹುದು. ಎಲ್ಲವೂ ಆತನ ಸಂಕಲ್ಪದಂತೆಯೇ ಜರುಗುತ್ತದೆ. ಅಂದಮೇಲೆ ವೃಥಾ ಕೊರಗದೆ, ಇನ್ನೊಬ್ಬರಿಗೆ ಕೆಡುಕುಂಟು ಮಾಡದೆ, ನಾಲ್ಕು ಜನರಿಗೆ ಉಪಕಾರವಾಗುವ ರೀತಿಯಲ್ಲಿ ಅ ಜೀವನ ಸವೆಸಿಬಿಟ್ಟರೆ ಅತನ ಅನುಗ್ರಹ ಸದಾ ಕಾಲ ನಮ್ಮ ಮೇಲಿರುವುದಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನದ ಜೊತೆಗೆ ವಿಶೇಷವಾಗಿ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

ಅಂಬುದಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ
ಬೆಂಬದೊಳಗಿಮಿತ ಸತ್ತ್ವವ ಪಿಡೀಬಿಡುವ ಭಕ್ತಿ -
ಯಿಂಬು ಕಿಂಚನ್ಮತಿಗೆ - ಮಂಕುತಿಮ್ಮ

ಮಡಕೆಯಲ್ಲಿ ಸಮುದ್ರದ ನೀರನ್ನೆಲ್ಲಾ ತುಂಬಿಕೊಳ್ಳಲು ಸಾಧ್ಯವೆ? ಅಂತೆಯೇ ನಿಮ್ಮ ಮನೆಯಂಗಳದ ಕಿಟಕಿಯ ಮುಖಾಂತರ ತೂರಿ ಬಂದ ಹೊಂಬಿಸಿಲನ್ನು ತುಂಬಿಕೊಳ್ಳಲು ಸಾಧ್ಯವೆ? ಇಡೀ ಸಂಪತ್ತಿಗೆಲ್ಲಾ ಬಡವನೊಬ್ಬನು ಒಡೆಯನಾಗುವನೇ ತಿಮ್ಮ ತಿಮ್ಮಿಯರೆ?ಭಕ್ತನಾದವನು ಬಿಂಬದಲ್ಲಿ ಅನಂತ ಸತ್ತ್ವವನು ಕಾಣುವನು. ಯಾವುದೇ ಕ್ಷೇತ್ರವಾಗಲಿ ನಾವು ನಾವು ಮಾಡುವ ಕೆಲಸಗಳ ಮೇಲೇ ಭಯ ಭಕ್ತಿ ಇದ್ದರೆ ಮಾತ್ರ ನೆರವಾಗಬಲ್ಲದೆಂದು ಈ ಕಗ್ಗದಲ್ಲಿ ತಿಳಿದುಬರುತ್ತದೆಯಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ

No comments:

Post a Comment