Tuesday, September 7, 2010

ಜಗದ ಸಂತಾಪ ಸಂತಸ ಸಂಭ್ರಮಂಗಳಿರಲಿ |

ಜಗದ ಸಂತಾಪ ಸಂತಸ ಸಂಭ್ರಮಂಗಳಿರಲಿ
ಬಗಿದು ನರನೆದೆಯಮ್ ಜೀವವ ಪಿಡಿದು ಕುಲುಕೆ
ನೊಗೆಯಿಪುದು ಮನಸಿಗದು ಕವಿಕಲಾರಸಿಕರ್ಗೆ
ಜಗಂ ಸೂರ್ಯಂ ನೀಂ ಕಮಲ - ಮಂಕುತಿಮ್ಮ

ಈ ಜಗತ್ತಿನಲ್ಲಿರುವ ಸುಖ, ದುಃಖ ಮತ್ತು ಸಂಭ್ರಮಗಳು ಮಾನುಷ್ಯನ ಅಂತರಂಗಕ್ಕೆ ಲಗ್ಗೆ ಹಾಕಿಬಿಡುತ್ತದೆಯಲ್ಲವೆ? ನಿಜ... ಅದು ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಕುಲುಕಾಡಿಬಿಡುತ್ತದೆ. ಅದು ಕವಿ, ಕಲಾವಿದರ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ನನ್ನಂಥಹ, ನಿಮ್ಮಂತಹ ರಸಿಕರುಗಳ ಮನಸ್ಸಿಗೆ ಅತಿ ಸಂತೋಷವನ್ನು ನೀಡುತ್ತದೆಯಲ್ಲವೆ? ನಿಜ ಜಗತ್ತು ಸೂರ್ಯನಾಗಿಬಿಟ್ಟರೆ ನಾವೇ ಅರಳಿನಿಂತ ಕಮಲ ಸ್ನೇಹಿತರೆ ನಿಮ್ಮ ರವಿಯು ಎಂದಿನಶುಭನುಡಿ...ಶುಭದಿನ ಶುಭೋದಯ

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ
ದಿಕ್ಕವರಿಗವರವರೆ - ಮಂಕುತಿಮ್ಮ

ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕುರಿತು ವೃಥಾ ಚಿಂತೆ, ಕಳವಳವನ್ನು ಮಾಡದಿದ್ದರೆ ಸರಿ. ಈ ಲೋಕದಲ್ಲಿ ಭಾಗ್ಯವು ಹೇಗೇಗೋ ಲಭಿಸಬಲ್ಲದು. ಅದು ಪರಮಾತ್ಮನ ಕೃಪೆಯಲ್ಲದೆ ಮತ್ತೇನು? ಉದಾಹರಣೆಗೆ : ಕೌರವರಿಗೂ ಪಾಂಡವರಿಗೂ ರಾಜ್ಯಭಾರದ ಸುಖ ಲಭಿಸಿತೆ? ಅಂತೆಯೆ ಅವರಿಗೆ ಅವರವರೆ ದಿಕ್ಕು ಕಣೋ ಮಂಕುತಿಮ್ಮ/ತಿಮ್ಮಿ.... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಭಾವತಾಗೋದ್ರೇಕ ತಾನೆ ತಪ್ಪೇನಿಲ್ಲ
ಧೀವಿವೇಕದ ಸಮತೆಯದರಿನದಿರದಿರೆ
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ
ಪಾವನವೂ ಹೃನ್ಮಥನ - ಮಂಕುತಿಮ್ಮ

ಮನುಷ್ಯರಿಗೆ ಭಾವ-ರಾಗ, ರೋಷ ದ್ವೇಷ, ಮೋಹ-ಕಾಮನೆಗಳಿದ್ದರೆ ತಪ್ಪೇನಿಲ್ಲ.. ಆದರೆ ನಮ್ಮ ವಿವೇಕ, ಸಮತಾಭಾವನೆಗಳಿಗೆ ಧಕ್ಕೆಯಾಗಬಾರದು. ಅಜ್ಞಾನ, ಅವಿದ್ಯೆಗಳನ್ನು ಮೋಹ, ಮಮತೆಗಳು ಸೋಕದೆ ಇದ್ದರೆ ನಮ್ಮಯ ಬಾಳು ಪಾವನವಲ್ಲವೆ ನನ್ನ ಸನ್ಮಿತ್ರರೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯು ನಿಮಗೆ ಶುಭದಿನ ಶುಭೋದಯ ಹೇಳ್ತಾ.....ರೈಟ್ ಹೇಳೋದು

ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ
ಮನದಿ ತೆರೆಗಳ ಕುಲುಕಿ ಕಡೆಯುವುದಿಮೊಳಿತು
ಘನ ವರ್ಷ ಬಿರುಗಾಳಿ ಬಡಿಯಲಿರುಲೋಲ್ ನೆಲನ
ದಿನದ ಸೊಗಸಿಮ್ಮಡಿತೊ - ಮಂಕುತಿಮ್ಮ

ನಮ್ಮ ಬಾಳದಾರಿಯಲ್ಲಿ ಒಮ್ಮೆ ಸುಖ - ದುಃಖಗಳ ಬಿರುಗಾಳಿ ಬೀಸುತ್ತದೆ ಹಾಗೆಯೇ ನಮ್ಮ ಮನಸ್ಸಿನಲ್ಲಿ ಆರ್ಭಟದ ಅಲೆಗಳನ್ನು ಸಹ ಎಬ್ಬಿಸುತ್ತದೆಯಲ್ಲವೆ? ಮೊಸರನ್ನು ಕಡೆಯುವಂತೆ ನಮ್ಮ ಮನಸ್ಸನ್ನು ಕಡೆಯುವುದು ಒಳ್ಳೆಯದೆ... ಅದರಿಂದ ನನ್ನ ನಿಮ್ಮ ಚೆಲುವು ಇನ್ನೂ ದ್ವಿಗುಣಗೊಳ್ಳುತ್ತದೆ ಉದಾಹರಣೆಗೆ ಮೋಡ, ಮಳೆ, ಬಿರುಗಾಳಿ ಹಗಲಿರುಳೆನ್ನದೆ ಬೀಸಲು ನೆಲದ ಮತ್ತು ಆ ದಿನದ ಸೌಂದರ್ಯ ಇಮ್ಮಡಿಗೊಳಿಸುವುದಿಲ್ಲವೆ? ಹಾಗೆ.... ಸ್ನೇಹಿತರೆ ನನ್ನದಲ್ಲದಿದ್ದರೂ ನಿಮ್ಮ ಸೌಂದರ್ಯವಂತೂ ದ್ವಿಗುಣಗೊಳ್ಳಿಸಲೆಂದು ಆ ಭಗವಂತನಲ್ಲಿ ಮೊರೆಯಿಡುತಾ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ ಎಂದಿನಂತೆ ಶುಭದಿನ ಶುಭೋದಯ

ಬಂಧನವದೇನಲ್ಲ ಜೀವಜೀವಪ್ರೇಮ
ಒಂದೆ ನೆಲೆ ಜೀವವರೆ, ಬೆರತರಳೆ ಪೂರ್ಣ
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ - ಮಂಕುತಿಮ್ಮ

ಎಲವೋ ತಿಮ್ಮ ತಿಮ್ಮಯರೆ, ಪ್ರಕೃತಿಯಲ್ಲಿನ ಜೀವಜೀವಗಳ ನಡುವಿನ ಬಾಂಧವ್ಯಗಳ ಒಲವೇ ಸಹಜ ಕ್ರಿಯೆ, ಒಂಟಿಯಾಗಿ ನಿಂತರೆ ಅರ್ಧ ಜೀವ, ಎಲ್ಲರೊಡನೆ ಬೆರತು ಅರಳಿದರೆ ಪೂರ್ಣಜೀವ ಅದು ಬಂಧನವಲ್ಲ ಮಿತ್ರರೆ... ಎದುರಾಗುವ ಕಷ್ಟಕೋಟಲೆಗಳನ್ನು ಅರ್ಧಮಾಡಿ ನಂತರ ಸಂತೋಷವನ್ನು ಎರಡರಷ್ಟು ಉಂಟುಮಾಡುವ ಆ ಬಾಂಧವ್ಯ ನಮಗೆ ದೇವರ ಕೃಪೆಯಾಗಿದೆ. ಅಂತಹ ದೇವನು ಕರುಣಿಸಿದ ಆ ಬಾಂಧವ್ಯ ನಿಮಗೆ ನಿರಂತರವಾಗಿರಲೆಂದು ಆಶಿಸುತ್ತಾ ನಿಮಗೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ "ಶುಭದಿನ ಶುಭೋದಯ"

ಇಹುದಕಿಂತೊಳಿತಿಹುದು : ಒಳಿತ ಗಳಿಸಲ್ಪಹುದು
ಸಹಸಿಸುವೆನದಕೆನುವ ಮತಿಯಿನೇ ಪ್ರಗತಿ
ರಹಸಿಯದ ಬುಗ್ಗೆಯದು, ಚಿಮ್ಮುತಿಯುದೆಲ್ಲರೊಳು
ಸಹಜವಾ ಮತಿಕೃತಕ - ಮಂಕುತಿಮ್ಮ

ಮುಂದೆ ನಮಗೆ ಇನ್ನು ಒಳ್ಳೆಯ ಬದುಕುಂಟು.. ಅದನು ಪಡೆಯಲು ಜೀವನವನ್ನೇ ಸವೆಸುವೆನು ಎಂಬ ಮನಸ್ಸು ಇದ್ದಲ್ಲಿ ಖಂಡಿತ ಪ್ರಗತಿಗೆ ನಾಂದಿಯಾಗುವುದು. ಜೀವನದಲ್ಲಿ ನಾವುಗಳು ಕೈಗೊಳ್ಳುವ "ಸಂಕಲ್ಪ"ವೇ ರಹಸ್ಯದ ಚಿಲುಮೆ... ಎಲ್ಲರಲ್ಲೂ ಅದು ಚಿಮ್ಮುತ್ತಿರುತ್ತದೆ.. ಆದರೆ ದೃಡಸಂಕಲ್ಪದ ಕೊರತೆ ಮಾತ್ರ ಇದ್ದೇಇರುತ್ತದೆ.. ನನ್ನ ಸ್ನೇಹಿತರೆಲ್ಲರೂ ದೃಡಸಂಕಲ್ಪ ಕೈಗೊಳ್ಳುವವರೆಂದು ಆಶಿಸುತ್ತಾ ಎಂದಿನಂತೆ ಶುಭದಿನ ಶುಭೋದಯ

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು ?
ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ
ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ

ಅಚಲವಾಗಿ ನಿಂತ ಬೃಹತ್ ಹಿಮಾಲಯ ನೋಡಿದಾಗ ಸಣ್ಣ ಕ್ರಿಮಿಯ ಹಿರಿಮೆ ದೊಡ್ಡದು ಎಂದೆನಿಸುವುದಿಲ್ಲ... ಆದರೆ ಕ್ರಿಮಿಗೆ ಹಸಿವುಂಟು, ಅಲೆದಾಟ, ಅಸಂಖ್ಯಾತ ಪೀಳಿಗೆಗಳಿರುತ್ತವೆ... ಹೀಗಿರುವಾಗ ಕ್ರಿಮಿಗಳ ಸಾಲನ್ನು ಕಡೆಗಣಿಸಲಾಗದು.. ಅಂತೆಯೇ ಯಾರ ಹಿರಿಮೆಯನ್ನು ಕಡೆಗಣಿಸಬಾರದಲ್ಲವೆ? ಅವರವರ ಯೋಗ್ಯತಾನುಸಾರವಾಗಿ ಅವರವರ ಹಿರಿಮೆ ಇದ್ದೇಇರುತ್ತದೆ... ಎಂದಿನಂತೆ ನನ್ನ ಸ್ನೇಹಿತರಾದ ನಿಮಗೆ ರವಿಯ ಪ್ರೀತಿಯ ಶುಭದಿನ ಶುಭೋದಯ

No comments:

Post a Comment