Tuesday, September 7, 2010

ಖದ್ಯೋತನಂತೆ ಬಿಡುಗೊಳ್ಳದೆ ಧರ್ಮದ ಚರಿಸು |

ಖದ್ಯೋತನಂತೆ ಬಿಡುಗೊಳ್ಳದೆ ಧರ್ಮದ ಚರಿಸು
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರಿ
ಸದ್ದು ಮಾಡದೆ ಮಡಗು - ಮಂಕುತಿಮ್ಮ

ಸ್ನೇಹಿತರೆ... ಬಲಗೈಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂದು ಹೇಳಿದ್ದಾರೆ ಹಿರಿಯರು... ನೋಡಿ ಸೂರ್ಯನಂತೆ ಬಿಡದೆ ಧರ್ಮವನ್ನು ಪಾಲಿಸುವಂತರಾಗಿ, ಮಿಂಚಿನ ಬಳ್ಳಿಯ ರೀತಿಯಂತೆ ಬೆಳಕನ್ನು ಚೆಲ್ಲುವಂತರಾಗಿ. ಗೆಲುವು ಆದದ್ದು ಏನೆಂದು ಕೇಳದೆ, ನೋಡದೆ ನಿಮ್ಮ ಕೈಮೀರಿ ಗದ್ದಲ ಮಾಡದೆ ಬಾಗಿ ಈ ಬಾಳಹಾದಿಯನ್ನ ಸವೆಸುವಂತರಾಗಿ.... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಬನ್ನಬವಣೆಗಳ ತಾನೆನಿತನೆತು ಪಟ್ಟಿರೆಯು
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು
ಚಿನ್ಯಯತೆಯಾತ್ಮಗುಣ - ಮಂಕುತಿಮ್ಮ

ತನ್ನ ಬದುಕಿನಲ್ಲಿ ಮನುಷ್ಯನು ಎಷ್ಟೋ ಕಷ್ಟಕೋಟಲೆಗಳನ್ನು ಪಟ್ಟಿರುವನಲ್ಲವೆ? ಅದಾಗ್ಯೂ ಸುಮ್ಮನಿರದೆ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಲೇ ಇರುತ್ತಾನೆ. ಮಾನವನ ಹೃದಯದೊಳಗಿರುವ ಆತ್ಮವು ಚಿನ್ಮಯತೆಯಿಂದಿರುವುದೇ ಇದಕ್ಕೆ ಪ್ರೇರಣೆಯಾಗಿದೆಯಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ವಿವಿಧರಸಗಳ ಭಟ್ಟಿ, ಸೌಂದರ್ಯ ಕಾಮೇಷ್ಟಿ
ಕವಿಜಗತ್ಸಷ್ಟಿಯದು ಕಲೆಗಾನಾಕೃಷಿ
ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು
ತಪಸೊಂದೆ ಪಥವದಕೆ - ಮಂಕುತಿಮ್ಮ

ಸೌಂದರ್ಯ ಎಂದೊಡನೆ ಮನಕ್ಕೆ ಎಷ್ಟು ಖುಶಿ ಆಗುತ್ತೆ ನೋಡಿ... ಆ ಸೌಂದರ್ಯದ ಗಮ್ಮತ್ತೇ ಹಂಗಿರುತ್ತದೆ. ಅದು ನಾನಾ ರಸಗಳ ಸಾರ.. ಕಾಮವನ್ನು ಪಡೆಯಲು ಮಾಡಿದ ಯಜ್ಞವೆಂದು "ರಸಿಕ ಮಹಾಶಯ" ರ ಅಂಬೋಣ. ಕವಿಗಳಿಗೆ ಸೌಂದರ್ಯವು ಜಗದ ಸೃಷ್ಟಿ. ಕಲಾವಿದನೊಬ್ಬ ಸೌಂದರ್ಯವನ್ನು ಎಳೆದು ತರಬಲ್ಲ ತಾಕತ್ತು ಆತನಿಗಿರುತ್ತದೆ. ಒಟ್ಟಿನಲ್ಲಿ ಸೌಂದರ್ಯದ ಈ ಅಂತರಂಗವನ್ನು ಅರಿಯಲು ಸಾಧ್ಯವೇ ಇಲ್ಲ, ಅದನ್ನು ಅರಿಯಲು ನಿಷ್ಟೆಯೆಂಬ ತಪಸ್ಸು ಮಾಡಬೇಕು. ಆಗಲೇ ಆ ಸೌಂದರ್ಯದ ವಿರಾಟ್ ದರ್ಶನ ಸಾದ್ಯ ಸ್ನೇಹಿತರೆ, ನನ್ನ ಗೆಳತಿಯರೇ... ಅತ್ಯಂತ ಕಲಾರಾಧಕರು, ಸೌಂದರ್ಯೋಪಾಸಕರು ಆದ ನಿಮಗೆನಿಮ್ಮ ಸ್ನೇಹಿತನಾದ ರವಿಯ ಪ್ರೀತಿಯ ಶುಭನುಡಿ - ಶುಭದಿನ ಶುಭೋದಯ


ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ
ಎತ್ತಲೋ ಸಖನೊರ್ವನಿಹನೆಂದು ನಂಬಿ
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆಯೆ ನಮದು - ಮಂಕುತಿಮ್ಮ

ಗಮನಿಸಿ ನೋಡಿ, ಕತ್ತಲಿನಲ್ಲಿ ಏನನ್ನೋ ಕಂಡು ಬೆದರಿದ ನಾಯಿಯೊಂದು ತನ್ನ ಪಾಲಿನ ಗೆಳೆಯನೋರ್ವನು ಇದ್ದಾನೆಂದು ನಂಬಿ ಕತ್ತನ್ನು ಎತ್ತಿ ಬೊಗಳಿ ಹಾರಾಡುತ್ತದೆ.. ಇಲ್ಲಿ ಮುಖ್ಯವಾಗಿ ನಂಬಿಕೆಯ ಹುಡುಕಾಟವೇ ನಮ್ಮ ಭಕ್ತಿಯಾಗಿದೆಯಲ್ಲವೆ? ಅಂತಹ ನಂಬಿಕೆ ನಿಮ್ಮ ಜೀವನದಲ್ಲೂ ಸದಾ ಕಾಲ ಇರಲೆಂದು ಹಾರೈಸುತಾ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ - ಶುಭದಿನ ಶುಭೋದಯ

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ
ವಿಹಿತದ ಸ್ಥಾನದಿಂ ಸಹಜ ಗುಣಬಳದಿಂ
ದಿಹಪರಸಮನ್ವಯದ ಸರ್ವಹಿತ ಸಂಸ್ಥಿಗೆ
ಸಹಕರಿಪುದಲೇ ಧರ್ಮ - ಮಂಕುತಿಮ್ಮ

ಯಾವುದು ಧರ್ಮ?? ಯಾವ ಧರ್ಮ ಹೆಚ್ಚು ?? ಹಿಂದು ಧರ್ಮವೇ? ಕ್ರೈಸ್ತ ಧರ್ಮವೇ? ಇಸ್ಲಾಮಿಕ್ ಧರ್ಮವೇ?? ಯಾದ ಧರ್ಮ , ಆ ದೇವನು ಮೆಚ್ಚುವ ಧರ್ಮ ಯಾವುದು ಗೊತ್ತೇ??
ಮನೆ, ರಾಷ್ಟ್ರ , ಸಮಾಜಗಳ ಹಾಗು ಲೋಕ ಕಲ್ಯಾಣಕ್ಕಾಗಿ ಅರ್ಹವಾದ ಸ್ಥಾನದಲ್ಲಿ ಇದ್ದುಕೊಂಡು ನಮ್ಮಯ ಸಹಜವಾದ ಗುಣಬಲದಿಂದ ಮತ್ತು ಇಹ - ಪರಗಳ ಸಮನ್ವಯದ ಗುಣದಿಂದ ಎಲ್ಲರ ಏಳ್ಗೆಗೆ ಸಹಕರಿಸುವುದೇ ಧರ್ಮ... ಅಲ್ಲವೇ?? ಮನಕ್ಕೆ ಕಷ್ಟವಾದರೂ ಇದುವೇ ಆ ದೇವನು ಮೆಚ್ಚುವ ಧರ್ಮ.. ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ
ಕಾಯಿಸುತ ಕರಿಯುತ ಹುರಿಯುತ ಸುಡುತ
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ
ಬಾಯಿ ಚಪ್ಪರಿಸುವನು - ಮಂಕುತಿಮ್ಮ

ವಿಧಿಯು ನಮ್ಮನ್ನು ಈ ಭೂಮಿಯೆಂಬ ಒಲೆಯಲ್ಲಿ ನಮ್ಮಯ ಬಾಳನ್ನು ಇಟ್ಟು ಚೆನ್ನಾಗಿ ನೆನಸುತ್ತಾ, ಬೇಯಿಸುತ್ತಾ ಇದೆ. ಅಷ್ಟಕ್ಕೆ ಅದು ತೃಪ್ತನಾಗದೆ ಸಮಯ ನೋಡಿಕೊಂಡೂ ನಮ್ಮನ್ನು ಕೊಚ್ಚುತ್ತಲೂ, ಕಾಯಿಸುತ್ತಲೂ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವೊಂದು ಕಡೆ ಬಾಣಲೆಯಲ್ಲಿ ಕುದಿವ ಎಣ್ಣಿಯಲ್ಲಿ ಕಾಯಿಸುತ್ತಾ, ಹುರಿಯುತ್ತಾ ಚೆನ್ನಾಗಿ ಸುಡುತ್ತಾ ಬಗೆಬಗೆಯ ಭಕ್ಷಗಳನ್ನು ಮಾಡಿ ಬಾಯಿ ಚಪ್ಪರಿಸುತ್ತಾ ಇದೆ. ಅಯ್ಯೋ ವಿಧಿಯೇ... ಇದೇನು ನಿನ್ನ ಲೀಲೆ? ಒಟ್ಟಿನಲ್ಲಿ ನಮ್ಮ ಕರ್ಮವನ್ನು ಮಾಡಿ ಫಲಾಫಲಗಳನ್ನು ಆ ಭಗವಂತನಿಗೆ ಅರ್ಪಿಸೋಣ... ಆಪಾತ್‌ಕಾಲದಲ್ಲಿ ಆತನಲ್ಲದೆ ನಮಗಾರು ನೆಂಟರು? ಆಕಾಶದಿಂದ ದೇವನು ಬರಲಾಗೋಲ್ಲವೆಂದೇ ನಿಮ್ಮಂಥಹ ಸ್ನೇಹಿತರನ್ನು ದಯಪಾಲಿಸಿರುವನು. "ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ" . ನಿಷ್ಕಂಲ್ಮಶ ಪ್ರೀತಿಯ ಸ್ನೇಹವೊಂದಿದ್ದರೆ ಎಂತಹ ದುರ್ಬಲನೂ ಸಬಲನಾಗುತ್ತಾನೆಂದು ನನ್ನ ಭಾವನೆ. ಎಂದಿನಂತೆ ನಿಮಗೆ ಪ್ರೀತಿಯ ಶುಭದಿನ ಶುಭೋದಯ ನನ್ನ ಸನ್ಮಿತ್ರರೆ

ಅರೋಗ್ಯಭಾಗ್ಯವನು ಮನಕೆ ತನುಗೆಂತಂತೆ
ಹಾರಯಿಸುವೊಡೆ ಹಲವು ಸರಳನೀತಿಗಳ
ಧಾರಯಿಸು ನೆನಪಿರಲಿನುಡಿಯಲಿ ನಡತೆಯಲಿ
ಪಾರಾಗು ಸುಳಿಯಿಂದ - ಮಂಕುತಿಮ್ಮ

ಸ್ನೇಹಿತರೆ ಮೊದಲು ಮಾನವನು ನೆಮ್ಮದಿಯಾಗಿ ಬದುಕಲು "ಆರೋಗ್ಯಭಾಗ್ಯ" ಬೇಕೇ ಬೇಕು. ಅಂತೆಯೇ ನಮ್ಮ ತನು ಮನಗಳು ಸರಳವಾದ ಹಲವು ನೀತಿಗಳನ್ನು ಧರಿಸುವಂತೆ ರೂಪಿಸಿಕೊಳ್ಳಬೇಕು. ಹಾಗೆ ಅಳವಡಿಸಿಕೊಂಡ ನಡೆನುಡಿಯಲ್ಲಿ ತತ್ವವಿರಬೇಕು ಮತ್ತು ಅನೀತಿಯೆಂಬ ಸುಳಿಯಿಂದ ಪಾರಾಗಿಬಿಟ್ಟಲ್ಲಿ ನಮ್ಮ ಸಮ ಯಾರಿಹರು? ನೆಚ್ಚಿನ ತಿಮ್ಮ/ತಿಮ್ಮಿಯರಿಗೆ ಆರೋಗ್ಯಭಾಗ್ಯ ಸಿದ್ದಿಸಿ, ನೂರ್ಕಾಲ ಚೆನ್ನಾಗಿ ಬಾಳಿರೆಂದು ಕೋರುತ್ತಾ ಎಂದಿನಂತೆ ನಿಮ್ಮ ಸ್ನೇಹಿತನ ಶುಭನುಡಿ- ಶುಭದಿನ ಶುಭೋದಯ

ಬರದಿಹುದರಣೆಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತರುವುದನು ಕೇಡುಗಳ ನಡುವೆ
ಇರುವ ಭಾಗ್ಯವೆ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯಲೊ - ಮಂಕುತಿಮ್ಮ

ಸ್ನೇಹಿತರೆ... ಇಲ್ಲದಿರುವುದಕ್ಕೆ ಚಿಂತಿಸುತ್ತಾ, ಕಣ್ಣ ಮುಂದೆ ಇರೋ ಸುಖವ ತಿರಸ್ಕರಿಸದಿರಿ... ಇರೋ ಸುಖವನ್ನು ಕಡೆಗಣಿಸಿ ಇಲ್ಲದ ಸುಖವ ಹುಡುಕದಿರಿ. ಯಾವತ್ತೂ ಕೆಟ್ಟದರ ನಡುವೆ ಒಳ್ಳೇಯದೂ ಇರುತ್ತದೆ, ಅಂತವುಗಳನ್ನು ಗುರುತಿಸಿ......ಇರುವ ಸುಖವ ಮರೆತು, ಅದು ಕರೆದರೆ ಒಲ್ಲೆಯೆನ್ನದಿರಿ.. ಅಲ್ಪವೋ , ಅಗಾಧವೋ ಯಾವುದಾದರೂ ಸರಿ, ಸಂತೋಷದಿಂದ ಸ್ವೀಕರಿಸಿ... ಅದೇ ಸುಖದ ಹಾದಿ ಮತ್ತು ಸುಖೀಜೀವನ... ನನ್ನ ತಿಮ್ಮ/ತಿಮ್ಮಿಯರು ಯಾವಾಗಲೂ ಸುಖದಿಂದ ಇರಲೆಂದು ಹಾರೈಸುತ್ತಾ ಎಂದಿನಂತೆ ಶುಭದಿನ ಶುಭೋದಯ

ತಡಕಾಟ ಬದುಕೆಲ್ಲವೇಕಾಕಿಜೀವ ತ
ನ್ನೊಡನಾಡೀ ಜೀವಗಳ ತಡಕಿ ಮಮತೆಗಳ
ಪಿಡೀಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ - ಮಂಕುತಿಮ್ಮ

ಸ್ನೇಹಿತರೇ ನಮ್ಮಯ ಬದುಕೇ ಒಂದು ತಡಕಾಟ, ಆ ತಡಕಾಟದಲ್ಲಿ ನಮ್ಮಯ ಈ ಒಂಟಿ ಜೀವ ತನ್ನಯ ಜೊತೆಗಿನ ಜೀವಗಳನ್ನು ಹಿಡಿಯಲು ಕೈ ಚಾಚಬಹುದು... ತನ್ನಯ ಮನದನ್ನೆಯ ಜೀವಕ್ಕಾಗಿ ಹಂಬಲಿಸಿ ತಡಕಾಡಬಹುದು.. ಅಯ್ಯೋ ಆ ತಡಕಾಟದಲ್ಲಿ ಎಂತೆಂತಹ ನೋವು-ನಲಿವು ಇರಬಹುದಲ್ಲವೆ ಆ ನೋವು ನಲಿವಿನ ಪ್ರೀತಿ-ಪ್ರೇಮಗಳ ಜೊತೆ ಉತ್ತಮ ಗುಣವುಳ್ಳ ಸ್ನೇಹಿತರೂ, ಆಪ್ತಮಿತ್ರನೂ, ಮೇಲಾಗಿ ತಂದೆ ತಾಯಿ, ಸೋದರ-ಸೋದರಿಯರ ಮಮತೆಗಳ ಮಡುವಿನಲ್ಲಿ... ಓಹ್ ಸದಾ ಓಲಾಡುತ್ತಲೇ ಇರುತ್ತೇವಲ್ಲಾ? ಹೂಂ ಭಗವಂತನಾಡಿಸುವ ಪಾತ್ರದಾರಿಗಳಲ್ಲವೆ? ಸದಾ ಭಗವಂತನ ಅನುಗ್ರಹ ಇರಲೆಂದು ಕೋರುತಾ ನಿಮಗೆ ಎಂದಿನಂತೆ ಪ್ರೀತಿಯ ಶುಬದಿನ ಶುಭೋದಯ

ಸುಂದರವನೆಸಗು ಜೀವನದ ಸಾಹಸದಿಂದ
ಕುಂದಿಲ್ಲವದಕೆ ಸಾಹಸಭಂಗದಿಂದೆ
ಮುಂದಕದು ಸಾಗುವುದು ಮರಳಿ ಸಾಹಸದಿಂದ
ಚೆಂದ ಧೀರೋದ್ಯಮವೆ - ಮಂಕುತಿಮ್ಮ

ನಮ್ಮ ಜೀವನದಲ್ಲಿ ಏನೇ ಅಡ್ಡಿಆತಂಕಗಳು ಎದುರಾದರೂ ಅದನ್ನು ಧೈರ್ಯದಿಂದ, ಸಾಹಸದಿಂದ ಸಮರ್ಥವಾಗಿ ಎದುರಿಸಿದರೆ ನಮ್ಮೀ ಬದುಕು ಸುಂದರವಲ್ಲವೆ? ಒಮ್ಮೆ ಸೋಲಾದರೆ ನಮ್ಮೀ ಬದುಕೇನೂ ಕುಂದಿಹೋಗಲಾರದು.. ನಿಧಾನವಾಗಿ ಎಡವಿದ್ದೇಲ್ಲಿ ಎಂದು ಅರಿತು, ಮತ್ತೆ ಅಂತಹ ತಪ್ಪುಗಳನ್ನು ಮಾಡದೆ ಧೈರ್ಯವಾಗಿ ಮುನ್ನುಗ್ಗುತ್ತಾ ಸಾಗಿದಲ್ಲಿ ಜಯ ಕಟ್ಟಿಟ್ಟ ಬುತ್ತಿ.. ನಮ್ಮಯ ಬದುಕು ಕೂಡ ಧೀರೋದ್ದಾತವಾಗಿ ಸಾಗುತ್ತಲಿರುತ್ತದೆ...ಅಂತಹ ಧೀರ ಸಾಹಸವೃತ್ತಿ ನನ್ನ ತಿಮ್ಮಿ/ತಿಮ್ಮಂದರರಿಗೆ ಒಲಿಯಲೆಂದು ಆಶಿಸುತ್ತಾ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ತಿರುಗಿಸಲಿ ವಿಧಿರಾಯನಿಚ್ಚೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ

ನಮ್ಮ ಬಾಳದೋಣಿಯಲ್ಲಿ ಆ ವಿಧಿಯು ಅತನ ಇಚ್ಚೆಯಂತೆ ಯಂತ್ರವನ್ನು ತಿರುಗಿಸಲಿ. ತಾರಾಮಂಡಲಗಳು ತಮ್ಮ ಇಷ್ಟ ಬಂದ ಕಡೆ ಚಲಿಸಲಿ. ನಮ್ಮ ನಮ್ಮ ಕರ್ಮ ಹಾಗು ದೈವವೇ ಪರಿಹಾಸ ಮಾಡಲಿ. ಆದರೆ ನಮಗೆ ದೃಡಚಿತ್ತ ಇದ್ದಲ್ಲಿ ಎಂತಹುದೇ ಆಡ್ಡಿಆತಂಕಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದಿನಂತೆ ನನ್ನ ಸ್ನೇಹಿತರೆ ನಿಮಗಿದೋ ಶುಭದಿನ ಶುಭೋದಯ

ಪುಲಿ ಸಿಂಗದುಚ್ಚ್ವಾಸಹಸು ಹುಲ್ಲೆ ಹಯದುಸಿರು
ಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು
ಕಲೆತಿರ್ಪುವೀಯೆಲ್ಲ ಸಾಮುಸಿರ್ವೆಲರಿನಲಿ
ಕಲಬೆರೆಕೆ ಜಗದುಸಿರು - ಮಂಕುತಿಮ್ಮ

ಕ್ರೂರಿಗಳಾದ ಹುಲಿ, ಸಿಂಹಳ ಉಸಿರು, ಸಾದು ಹಸು- ಜಿಂಕೆಗಳ ಉಸಿರು, ವಿಷಜಂತುಗಳಾದ ಹಾವು ಇಲಿಗಳ ಉಸಿರು, ಹಕ್ಕಿ-ಹದ್ದುಗಳ ಉಸಿರುಗಳು ನಾವು ನಡೆಸಿದ ಉಸಿರಾಟದ ಗಾಳಿಯಲ್ಲಿಯೇ ಬೆರೆತುಬಿಟ್ಟಿದೆ. ಇನ್ನು ನಮಗೆ ಈ ಜಗದಲ್ಲಿ ಪರಿಶುದ್ದವಾಗಿರುವಂತದ್ದು ಏನು ಸಿಗಬಹುದು?? ನಾವು ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ಕಲಬೆರೆಕೆಯೇ ಆಗಿದೆಯಲ್ಲ? ಪರಿಶುದ್ದವಾಗಿ ಸಿಗುವಂತದ್ದು ಈ ಜಗದಲ್ಲಿ ಒಂದೇ... ಅದು "ಸ್ನೇಹ" ಎನ್ನುವುದೇ ನನ್ನ ಭಾವನೆ... ನನ್ನ ಮೆಚ್ಚಿನ ಸ್ನೇಹಿತರೇ... ಅದಕ್ಕೇಂದು ಲೋಪವನ್ನು ತರದೆ, ಪರಿಶುದ್ದವಾದ ಸ್ನೇಹವನ್ನು ಕೊಟ್ಟು, ಸ್ನೇಹವನ್ನು ಪಡೆಯಿರೆಂದು ಆಶಿಸುವೆ. ನಿಮಗೆ ನಿಮ್ಮ ಅತ್ಮೀಯ ಸ್ನೇಹಿತನ ಪ್ರೀತಿಯ ಶುಭನುಡಿ - ಶುಭದಿನ ಶುಭೋದಯ

ಸುರಸಭೆಯಲಿ ಗಾಧಿಸುತ ವಸಿಷ್ಟ ಸ್ಪರ್ದೆ
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ
ಬರುವುದಿಂತೆತ್ತಣೆನೊ ಬೇಡದ ಪ್ರಾರಬ್ದ
ಕರುಮಗತಿ ಕೃತ್ರಿಮವೊ - ಮಂಕುತಿಮ್ಮ

ಒಮ್ಮೆ ಇಂದ್ರನ ಸಭೆಯಲ್ಲಿ ವಿಶ್ವಾಮಿತ್ರ ಮಹರ್ಷಿಗೂ, ವಸಿಷ್ಟ ಮಹರ್ಷಿಗೂ ಸ್ಪರ್ಧೆ ನಡೆಯಿತಂತೆ.. ಇವರ ಸ್ಪರ್ಧೆಯಿಂದ ಭೂಲೋಕದಲ್ಲಿ ರಾಜ ಹರಿಶ್ಚಂದ್ರನಿಗೆ ಕಷ್ಟವಾದ ವಿಷಯ ನನ್ನ ತಿಮ್ಮ ತಿಮ್ಮಿಯರಿಗೆ ಗೊತ್ತೆ ಇದೆ ಹೀಗೆ ನಮ್ಮಂಥಹ ಹುಲುಮಾನವರಿಗೆ ಅನಗತ್ಯವಾಗಿ ಒದಗಿಬಂದ ಗಂಡಾತರಗಳು ಗಂಡಾತರಗಳೂ ಹೆಂಗೆ ಬರುತ್ತವೆಯೋ ಗೊತ್ತಾಗೋಲ್ಲ, ಆದರೆ ಇದು ಕೇವಲ ಕೃತಿಮವೇ ಆಗಿರುತ್ತೆ ಅಂತೆಯೇ ಸುಖಾಂತ್ಯವಾಗಿಯೇ ಇರುತ್ತದೆ ಆ ಭಗವಂತನ ಕೃಪೆಯಿಂದ.... ಅಲ್ಲವೆ ಸ್ನೇಹಿತರೆ? ಎಂದಿನಂತೆ ನಿಮ್ಮ ಸ್ನೇಹಿತ ರವಿಯ ಶುಭದಿನ ಶುಭೋದಯ


ಸ್ವಾಭಾವಿಕವ ಮರೆತು ನಭಕೇಣೆ ಹೂಡುವುದುಮ್
ಅಭಾಸವನು ಸತ್ಯವೆಂದು ಬೆಮಿಸುವುದುಮ್
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್
ಅಭಿಶಾಪ ನರಕುಲಕೆ - ಮಂಕುತಿಮ್ಮ

ನಾವು ಸಹಜತೆಯನ್ನು ಮರೆತು ಸ್ವಾಭಾವಿಕವಾಗಿ ಆಕಾಶಕ್ಕೆ ಏಣೆಯನ್ನು ಹಾಕಲು ಹೋಗುತ್ತೇವೆ ಇಲ್ಲವೆ ನಾವು ಕಂಡ ಬ್ರಾಂತಿಯನ್ನೇ ಸತ್ಯವೆಂದು ಭ್ರಮಿಸುತ್ತೇವೆ. ಸಿರಿ ಸುಖಗಳ ಬೆನ್ನೆತ್ತಿ ದುಃಸ್ಥಿತಿಗೆ ಸಹಾ ಈಡಾಗುತ್ತೇವೆ. ಇದು ನಮ್ಮೊಬ್ಬರ ಕಥೆಯಲ್ಲ, ಇಡೀ ಮಾನವಕುಲಕ್ಕೆ ಅಂಟಿದ ದೊಡ್ಡ ಅಭಿಶಾಪ... ಹೂಂ ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದ್ ಇರಲಿ ಅಲ್ಲವೆ ತಿಮ್ಮ/ತಿಮ್ಮಿಯರೆ...... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯು ಶುಭನುಡಿ = ಶುಭದಿನ , ಶುಭಸಂಜೆ ಮತ್ತು ವಿಶೇಷವಾಗಿ ಶುಭವಾರಂತ್ಯ

ಹೇಮಕುಂಭದಿಕೊಳಚೆರೊಚ್ಚುನೀರ್ಗಳ ತುಂಬಿ
ರಾಮಣೀಯಕದೊಳಿಟ್ಟಾಮಗಂಧವನು
ಪ್ರೇಮಪುಷ್ಪಕೆ ಮೊನಚು ಗರಗಸವನಂಚರಿಸಿ
ಏಂ ಮಾಡಿದನೊ ಬೊಮ್ಮ - ಮಂಕುತಿಮ್ಮ

ಸ್ನೇಹಿತರೆ "ಪ್ರೇಮ"ವೆಂಬ ಮೋಹಪಾಶದಲ್ಲಿ ಬಿದ್ದುಹೋಗುವ ಮುನ್ನ ಒಮ್ಮೆ ಯೋಚಿಸಿ... ಆ ಭಗವಂತನು ಚಿನ್ನವೆಂಬ ಬಿಂದಿಗೆಯಲ್ಲಿ ಕೊಳಚೆ ನೀರನ್ನು ತುಂಬಿಸಿ, ದುರ್ವಾಸನೆಯ ಹಸಿಮಾಂಸವನ್ನು ರಮಣೀಯವಾಗಿರಿಸಿದ್ದಾನೆ. ಪ್ರೇಮದ ಕುಸುಮಕ್ಕೆ ಚೂಪಾದ ಗರಗರಸದ ಅಂಚನ್ನು ಇಟ್ಟುಬಿಟ್ಟಿದ್ದಾನೆ.. ಖಂಡಿತ ಗರಗಸದ ಅಂಚು ಸೋಕದೆ ಬಿಡಲಾರದು.. ಏನೋ ನನ್ನ ಹಾಗೆ ಜಾಣತನದಿಂದ ತಪ್ಪಿಸಿಕೊಳ್ಳುತ್ತೀರೆಂದು ನನಗೆ ಆಶಾಭಾವನೆ (ಅಬ್ಬ ಇಲ್ಲೂ ಆಶಾಳ ನೆನಪು) ಸ್ನೇಹಿತರೆ ಸ್ವಲ್ಪ ತುಂಟಾಟ, ತಲೆಹರಟೆ, ಹುಸಿಕೋಪ, ಅಗಾಧ ಪ್ರೀತಿವಿಶ್ವಾಸ ಇದ್ದರಲ್ಲವೆ ಜೀವನ ಹಾಲು ಜೇನಿನಂತೆ..... ಎಂದಿನಂತೆ ನಿಮಗೆ ಶುಭದಿನ ಶುಭೋದಯ

ಆಸೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೊಸದಾಟವೊ ದೈವ - ಮಂಕುತಿಮ್ಮ
ಭಗವಂತನು ನಮ್ಮ ಮೇಲೆ ಮೋಸದಾಟವು ಹೂಡಿ, ನಮ್ಮತ್ತ ಆಸೆಯೆಂಬ ಬಲೆಯನ್ನು ಬೀಸುತ್ತಾನೆ.ಕೆಲವೊಮ್ಮೆ ತೊಡರುಕಾಲನ್ನು ಅಡ್ಡಲಾಗಿಟ್ಟು ಬೀಳುಸುತ್ತಾನೆ. ಮತೊಮ್ಮೆ ನಮ್ಮನ್ನು ಘಾಸಿಗೊಳ್ಳುವಂತೆ ಮಾಡಿ ಬಾಯಿಬಾಯಿ ಬಿಡುವಂತೆ ಮಾಡುತ್ತಾನೆ. ಕೊನೆಯದಾಗಿ ಮೈಸವರಿ ಗುಟ್ಟಾಗಿ ನಗುತ್ತಾನೆ ಕೂಡ.... ಅದಕ್ಕೆ ಸ್ನೇಹಿತರೆ ಬರುವ ಕಷ್ಟಕಾಲವು ಹಾಗು ಸುಖ ಕಾಲವೂ ಯಾವುದು ಸಹ ಶಾಶ್ವತವಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಸಮನ್ವಯತೆಯಿಂದ ಕೂಡಿ ಬಾಳಿ ಕೈಲಾದರೆ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಬಾಳೋಣ... ಪ್ರತಿಯೊಬ್ಬರ ಹೃದಯದ ಕಮಲದಿ ನೆಲೆಸಿರುವ ಆ ಪರಮಾತ್ಮನಿಗೆ ವಂದಿಸುತಾ ನಿಮ್ಮ ಸ್ನೇಹಿತನಾದ ರವಿಯು ಎಂದಿನಂತೆ ಶುಭದಿನ ಶುಭೋದಯ ಹೇಳ್ತಾ ಇರೋದು

ಆಸೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೊಸದಾಟವೊ ದೈವ - ಮಂಕುತಿಮ್ಮ
ಭಗವಂತನು ನಮ್ಮ ಮೇಲೆ ಮೋಸದಾಟವು ಹೂಡಿ, ನಮ್ಮತ್ತ ಆಸೆಯೆಂಬ ಬಲೆಯನ್ನು ಬೀಸುತ್ತಾನೆ.ಕೆಲವೊಮ್ಮೆ ತೊಡರುಕಾಲನ್ನು ಅಡ್ಡಲಾಗಿಟ್ಟು ಬೀಳುಸುತ್ತಾನೆ. ಮತೊಮ್ಮೆ ನಮ್ಮನ್ನು ಘಾಸಿಗೊಳ್ಳುವಂತೆ ಮಾಡಿ ಬಾಯಿಬಾಯಿ ಬಿಡುವಂತೆ ಮಾಡುತ್ತಾನೆ. ಕೊನೆಯದಾಗಿ ಮೈಸವರಿ ಗುಟ್ಟಾಗಿ ನಗುತ್ತಾನೆ ಕೂಡ.... ಅದಕ್ಕೆ ಸ್ನೇಹಿತರೆ ಬರುವ ಕಷ್ಟಕಾಲವು ಹಾಗು ಸುಖ ಕಾಲವೂ ಯಾವುದು ಸಹ ಶಾಶ್ವತವಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಸಮನ್ವಯತೆಯಿಂದ ಕೂಡಿ ಬಾಳಿ ಕೈಲಾದರೆ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಬಾಳೋಣ... ಪ್ರತಿಯೊಬ್ಬರ ಹೃದಯದ ಕಮಲದಿ ನೆಲೆಸಿರುವ ಆ ಪರಮಾತ್ಮನಿಗೆ ವಂದಿಸುತಾ ನಿಮ್ಮ ಸ್ನೇಹಿತನಾದ ರವಿಯು ಎಂದಿನಂತೆ ಶುಭದಿನ ಶುಭೋದಯ ಹೇಳ್ತಾ ಇರೋದು

No comments:

Post a Comment